ಕರಂಧಮ : ಮನುವಂಶದ ಸುವರ್ಚಸನೆಂಬ ರಾಜ. ಇವನ ವಿಚಾರ ಮಹಾಭಾರತದಲ್ಲಿ ಬರುತ್ತದೆ. ಕೃತಯುಗದಲ್ಲಿ ನೀತಿಯುಕ್ತವಾದ ಲೋಕ ವ್ಯವಹಾರ ಮುಂದುವರಿಯಲೋಸುಗ ದಂಡಧರನಾದ ಮನುವೆಂಬ ರಾಜನಿದ್ದನಷ್ಟೆ. ಅವನಿಂದ ಬೆಳೆದ ಸಂತಾನದಲ್ಲಿ ಮನುವನ್ನು ಬಿಟ್ಟು ಐದನೆಯ ತಲೆಯವನಾದ ವಿವಿಂಶನೆಂಬ ರಾಜನಿಗೆ ಒಟ್ಟು ಹದಿನೈದು ಮಂದಿ ಮಕ್ಕಳಾದರು. ಎಲ್ಲರೂ ಹಿರಿಯ ಬಿಲ್ಲುಗಾರರೂ ಬ್ರಹ್ಮಪರರೂ ಸತ್ಯವಂತರೂ ದಾನಧರ್ಮಪರರೂ ಪ್ರಿಯ ಭಾಷಿಗಳೂ ಶಾಂತರೂ ಆಗಿದ್ದರು. ಅವರಲ್ಲಿ ಮೊದಲನೆಯವ ಖನೀನೇತ್ರ. ಶತ್ರುಗಳನ್ನು ಗೆದ್ದು ತೊಡಕು ತೊಂದರೆಗಳಿಲ್ಲದಂತೆ ರಾಜ್ಯವಾಳಲು ಸಮರ್ಥನಾಗದ ಕಾರಣ ಪ್ರಜೆಗಳು ಅವನ ರಾಜತ್ವಕ್ಕೆ ಇಷ್ಟಪಡದೆ ಅವನ ಮಗನಾದ ಸುವರ್ಚಸನೆಂಬುವನಿಗೆ ಪಟ್ಟಕಟ್ಟಿದರು. ಈತ ತನ್ನ ತಂದೆಗೆ ಏರ್ಪಟ್ಟು ಪ್ರಜಾಕೋಪವನ್ನೂ ಜ್ಞಾಪಿಸಿಕೊಂಡು ರಾಜನಿಗೆ ಬೇಕಾದ ವಿದ್ವತ್ಸಮ್ಮತವಾದ ಸದ್ಗುಣ ಸಂಪತ್ತಿನಿಂದ ಕೂಡಿ ರಾಜ್ಯವಾಳುತ್ತಿದ್ದ. ದಾನಧರ್ಮಪರತೆಯ ಆಧಿಕ್ಯದಿಂದ ಇವನ ಖಜಾನೆ ಬರಿದಾಗುತ್ತ ಬಂತು. ಅದನ್ನು ಕಂಡು ಛಿದ್ರಾನ್ವೇಷಿಗಳಾದ ಸಾಮಂತರಾಜರು ಇವನನ್ನು ಆಕ್ರಮಿಸಿ ಪೀಡಿಸಲಾರಂಭಿಸಲಾಗಿ, ಶತ್ರು ನಿರ್ನಾಮ ಮಾಡಲು ಈತ ತನ್ನ ಕೈಯನ್ನೇ ಊದಿ ಅದರಿಂದ ಅಪಾರವಾದ ಸೈನ್ಯವನ್ನು ಸೃಷ್ಟಿಸಿ ಅದರ ಮೂಲಕ ಎದುರಾಳಿಗಳನ್ನೆಲ್ಲ ಸಂಪುರ್ಣವಾಗಿ ಗೆದ್ದು ಧರ್ಮರಾಜ್ಯವನ್ನು ನೆಲೆಗೊಳಿಸಿದ ಕಾರಣ ಈತನಿಗೆ ಕರಂಧಮನೆಂದು ಹೆಸರಾಯಿತು. (ಎಸ್.ಎಸ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ